ನುಗ್ಗೆಹಳ್ಳಿ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಒಂದು ಗ್ರಾಮ; ಅದೇ ಹೆಸರಿನ ಹೋಬಳಿಯ ಕೇಂದ್ರ. ಚನ್ನರಾಯಪಟ್ಟಣದ ಈಶಾನ್ಯಕ್ಕೆ ಸುಮಾರು 19 ಕಿಮೀ. ದೂರದಲ್ಲಿ ಚನ್ನರಾಯಪಟ್ಟಣ-ತಿಪಟೂರು ರಸ್ತೆಯ ಮೇಲೆ ಇದೆ. ಜನಸಂಖ್ಯೆ 4,770 (2001). ಇದೊಂದು ಪುರಾತನ ಸ್ಥಳ. 13ನೆಯ ಶತಮಾನದಲ್ಲಿ ಹೊಯ್ಸಳ ಸೋಮೇಶ್ವರ ಆಳುತ್ತಿದ್ದಾಗ ಬೊಮ್ಮಣ್ಣ ದಂಡನಾಯಕ ಇಲ್ಲಿ ಅಗ್ರಹಾರವನ್ನು ಕಟ್ಟಿಸಿ, ಇದಕ್ಕೆ ವಿಜಯ ಸೋಮನಾಥಪುರವೆಂದು ಹೆಸರಿಟ್ಟ. ಊರಿನ ಮಧ್ಯದಲ್ಲಿ ವಿಷ್ಣು ದೇವಾಲಯವನ್ನೂ ಈಶಾನ್ಯಕ್ಕೆ ಶಿವದೇವಾಲಯವನ್ನೂ ಕಟ್ಟಿಸಿದ. ಈತನ ಅಕ್ಕ ಲಖ್ಖವ್ವೆ, ಬಲುಮನುಷ್ಯ ಕಮ್ಮಟದ ಬಸವಣ್ಣ ಇವರಿಬ್ಬರೂ ಇಲ್ಲಿ ಛತ್ರಗಳನ್ನು ಕಟ್ಟಿಸಿ ದತ್ತಿಬಿಟ್ಟರು. ವಿಜಯನಗರದ ಕಾಲದಲ್ಲಿ ಇದು ಒಂದು ನಾಡಿನ ರಾಜಧಾನಿಯಾಗಿತ್ತು; ಕಟ್ಟಿಗೆ ಗುಂಡಪ್ಪನಾಯಕ ಆಳುತ್ತಿದ್ದಾಗ ಇಲ್ಲಿಯ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಯಿತು. ತಿರುವೇಂಗಳನಾಥನ ದೇವಾಲಯವನ್ನು 16ನೆಯ ಶತಮಾನದಲ್ಲಿ ರಾಯನೃಪ ಕಟ್ಟಿಸಿದ. ಈ ಊರಿನಲ್ಲಿರುವ ಸೋಮೇಶ್ವರ ಗುಡಿಯನ್ನು 17ನೆಯ ಶತಮಾನದಲ್ಲಿ ವೆಂಕಣ್ಣ ಜೀರ್ಣೋದ್ಧಾರ ಮಾಡಿಸಿದ.

	ಇಲ್ಲಿರುವ ಸುಂದರವಾದ ಹೊಯ್ಸಳ ದೇವಾಲಯಗಳಿಗಾಗಿ ಈ ಊರು ಈಗ ಪ್ರಸಿದ್ಧವಾಗಿದೆ. ಈಗ ಲಕ್ಷ್ಮೀನರಸಿಂಹ ದೇವಾಲಯವೆಂದು ಕರೆಯುವ ವಿಷ್ಣು ದೇವಾಲಯ (1246) ತ್ರಿಕೂಟಾಚಲ. ಇದರ ಮಧ್ಯದ ಗರ್ಭಗುಡಿಯಲ್ಲಿ ಪ್ರಸನ್ನ ಕೇಶವನ ಮೂರ್ತಿಯೂ ಉಳಿದ ಗರ್ಭಗುಡಿಗಳ ಪೈಕಿ ಒಂದರಲ್ಲಿ ಲಕ್ಷ್ಮೀನರಸಿಂಹನ ಮತ್ತು ಇನ್ನೊಂದರಲ್ಲಿ ವೇಣುಗೋಪಾಲನ ಮೂರ್ತಿಗಳೂ ಇವೆ. ಮಧ್ಯದ ಗರ್ಭಗುಡಿಗೆ ಮಾತ್ರ ಹೊಯ್ಸಳ ಕಾಲದ ಸುಂದರವಾದ ಗೋಪುರವಿದೆ. ಸೋಮನಾಥಪುರ, ಹೊಸಹೊಳಲು, ಅರಳಗುಪ್ಪೆ ಮುಂತಾದ ಕಡೆ ಇರುವ ಹೊಯ್ಸಳ ದೇವಾಲಯಗಳ ಮಾದರಿಯಲ್ಲಿಯೇ ಈ ದೇವಾಲಯ ಇದೆ. ಇದು ಜಗತಿಯ ಮೇಲೆ ಬಳಪದಕಲ್ಲಿನಿಂದ ನಿರ್ಮಿತವಾಗಿದೆ. ಹೊರಗೋಡೆಗಳ ಬುಡದಲ್ಲಿ ಆನೆ, ಕುದುರೆ, ಪುರಾಣ ಕಥೆ, ಮಕರ ಮತ್ತು ಹಂಸಗಳ ಸಾಲುಗಳಿರುವ ಪಟ್ಟಿಕೆಗಳಿವೆ. ಪುರಾಣಕಥೆಗಳ ಪೈಕಿ ಭಾಗವತದ ಕಥೆಯನ್ನು ಮಾತ್ರ ಶಿಲ್ಪಿಸಿರುವುದು ಈ ದೇವಾಲಯದ ವೈಶಿಷ್ಟ್ಯ. ಗೋಡೆಗಳ ಮೇಲಿನ ಮೂರ್ತಿಶಿಲ್ಪ ಬಹುಮಟ್ಟಿಗೆ ಹೊಸಹೊಳಲು ಮತ್ತು ಸೋಮನಾಥಪುರ ದೇವಾಲಯಗಳ ಮೇಲಿನ ಮೂರ್ತಿಗಳಂತೆಯೇ ಇದೆ. ಬಳ್ಳಿಗಳ ವಿತಾನಗಳ ಕೆಳಗೆ ಹಲವು ಭಂಗಿಗಳಲ್ಲಿ ನಿಂತಿರುವ ಬಗೆಬಗೆಯ ದೇವತಾ ಮೂರ್ತಿಗಳೂ, ಅವುಗಳ ಎತ್ತರಕ್ಕೆ ಸ್ವಲ್ಪ ಸ್ಥೂಲವೆನಿಸಿದರೂ, ರಮಣೀಯವಾಗಿವೆ. ಇವು ಹೊಯ್ಸಳ ಶಿಲ್ಪದ ಮಾದರಿಯೆನಿಸಿವೆ. ಸುಂದರವಾದ ನವರಂಗದ ದ್ವಾರದ ಮೇಲೆ ವೀಣೆ ನುಡಿಸುತ್ತಿರುವ ಸರಸ್ವತಿಯ ಮೂರ್ತಿಯಿದೆ. ಇದೊಂದು ವಿಶೇಷ ನವರಂಗದ ಒಳಚಾವಣಿಗಳಲ್ಲಿ ಆಳವಾದ ಭುವನೇಶ್ವರಿಗಳಿವೆ. ಇವುಗಳಲ್ಲಿ ಒಂದೊಂದರ ಆಕೃತಿಯೂ ಬೇರೆ ಬೇರೆ ಬಗೆಯದಾಗಿದೆ. ಈ ದೇವಾಲಯದ ಅನೇಕ ಮೂರ್ತಿಗಳನ್ನು ಕಡೆದಿರುವವನು ಮಲ್ಲಿತಮ್ಮನೆಂಬ ಪ್ರಸಿದ್ಧ ಶಿಲ್ಪಿ. ಇವನು ದೇವಾಲಯದ ಉತ್ತರ ಭಾಗದಲ್ಲಿ ತನ್ನ ನಿಪುಣತೆಯನ್ನು ತೋರಿಸಿದ್ದಾನೆ. ದಕ್ಷಿಣ ಭಾಗದಲ್ಲಿ ಅಷ್ಟೇ ಉತ್ತಮವಾಗಿ ಕಂಡರಿಸಿರುವವನು ಅರಿಬಿರಿದ ರೂವಾರಿ ಗಿರಿವಜ್ರ ದಂಡ, ಬಿರಿದ ಪ್ರಸಾದಿ ಮಸ್ತಕಶೂಲ ಎಂಬ ಬಿರುದುಗಳನ್ನು ಪಡೆದಿದ್ದ ನಂದಿಯ ಬೈಚೋಜ. ದೇವಸ್ಥಾನದ ಪಾತಾಳಾಂಕಣ, ಹಜಾರ, ಹೊರನವರಂಗ ಮತ್ತು ಉಳಿದೆರಡು ಗರ್ಭಗುಡಿಗಳ ಗೋಪುರಗಳು ಇಲ್ಲಿ ಆಳುತ್ತಿದ್ದ ಪಾಳೆಯಗಾರರ ಕಾಲದಲ್ಲಿ ನಿರ್ಮಿತವಾದವು.

	ಸದಾಶಿವ ದೇವಾಲಯದ ಸುತ್ತಲೂ ಈಚಿನ ಅನೇಕ ಕಟ್ಟಡಗಳು ಇವೆ. ಮೂಲ ಹೊಯ್ಸಳ ದೇವಾಲಯದ ಹೊರಗೋಡೆಗಳ ಮೇಲೆ ಮೂರ್ತಿಶಿಲ್ಪವಿಲ್ಲ. ಆದರೆ ಇದರ ಗೋಪುರ ವಿಶಿಷ್ಟವಾದ್ದಾಗಿದೆ. ನವರಂಗದ ಭುವನೇಶ್ವರಿಗಳು ಸುಂದರವಾಗಿವೆ.
(ಎಂ.ಎಸ್.)

	16ನೆಯ ಶತಮಾನದಲ್ಲಿ ನುಗ್ಗೆಹಳ್ಳಿ ಒಂದು ಪಾಳೆಯಪಟ್ಟಾಗಿತ್ತು. ನುಗ್ಗೆಹಳ್ಳಿ ಮತ್ತು ಅದರ ಸುತ್ತಮುತ್ತಣ ಪ್ರದೇಶವನ್ನು ಹಿಂದೆ ಪೂಡೂರ ವಂಶಕ್ಕೆ ಸೇರಿದ ಪಾಳೆಯಗಾರರು ಆಳುತ್ತಿದ್ದರು. ಇವರ ಶಾಸನಗಳು ಹಾಸನ, ಅರಕಲಗೂಡು ಮತ್ತು ಚನ್ನರಾಯಪಟ್ಟಣಗಳಲ್ಲಿ ದೊರಕಿವೆ. ಸು. 1573ರ ಒಂದು ಶಾಸನದ ಪ್ರಕಾರ ಈ ವಂಶ ವಿಜಯನಗರದ ಪ್ರೌಢದೇವರಾಯನ ಅಳಿಯ ತಿರುಮಲರಾಯನವರೆಗೂ ಹೋಗುತ್ತದೆ. ನುಗ್ಗೆಹಳ್ಳಿಯ ವಿರೂಪರಾಜ ಮಹಾ ಅರಸುವಿನ ಮಗನಾದ ಮಲರಾಜ, ಸೀಗೆಯ ಹನುಮಂತ ದೇವಾಲಯಕ್ಕೆ ಭೂಮಿ ದಾನ ಮಾಡಿದನೆಂದು 1513ರ ಒಂದು ಶಾಸನ ತಿಳಿಸುತ್ತದೆ. ವಿರೂಪರಾಜ ಅರಸುವಿನ ಕಾಲದಲ್ಲಿ ರಾಮನಾಥಪುರದ ರಾಮೇಶ್ವರ ದೇವಾಲಯಕ್ಕೆ ಬಂದು ದಾನ ಕೊಡಲಾಯಿತು. ನುಗ್ಗೆಹಳ್ಳಿಯ ಲಕ್ಷ್ಮೀನರಸಿಂಹ ದೇವಾಲಯದ ಉತ್ಸವ ವಿಗ್ರಹವನ್ನೂ ಇತರ ಹಲವು ಲೋಹಪ್ರತಿಮೆಗಳನ್ನೂ ನುಗ್ಗೆಹಳ್ಳೀಯ ಪಾಳೆಯಗಾರ ಗೋಪಾಲ ಮಾಡಿಸಿದನೆಂದು ಗೊತ್ತಾಗುತ್ತದೆ.									(ಎ.ವಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ